ಕೆಲ ವರ್ಷಗಳ ಹಿಂದೆ ಇದ್ದ ಕಪ್ಪೆಗಳು ಈಗ ನಮ್ಮ ವಾಸಸ್ಥಳ, ಕೃಷಿಭೂಮಿಯಲ್ಲಿ ಕಾಣಸಿಗದಿದ್ದರೆ ಪರಿಸರ ಬದಲಾವಣೆಯ ಅಡ್ಡಪರಿಣಾಮಗಳಿಗೆ ನಮ್ಮ ಆ ಭೂಮಿ ಒಳಗಾಗಿದೆ ಎಂದೇ ಕಪ್ಪೆಗಳ ತಜ್ಞರು (ಬಾಟ್ರಾಕಾಲಜಿಸ್ಟ್) ತೀರ್ಮಾನಿಸುತ್ತಾರೆ. ಇದರರ್ಥ, ನಮ್ಮ ಸುತ್ತಮುತ್ತಲಿನಲ್ಲಿರುವ ಕ್ರಿಮಿ, ಕೀಟ ಮತ್ತು ಸೊಳ್ಳೆಗಳಂತಹ ಉಪದ್ರವಕಾರಿ ಪತಂಗಗಳನ್ನು ನಿಯಂತ್ರಿಸುವ, ನೈಸರ್ಗಿಕ ಆಹಾರ ಸರಪಳಿಯ, ಮಹತ್ತ÷್ವದ ಕೊಂಡಿ ಈ ಕಪ್ಪೆಗಳು!
ಕಪ್ಪೆ, ಹಲ್ಲಿ, ಹಾವುಗಳ ಬಗ್ಗೆ ಅಭ್ಯಾಸ ಮಾಡಿ ಏನ್ಮಾಡ್ತೀರಿ? ಯಾರಿಗೆ, ಏನ್ ಉಪಯೋಗ?’ – ಇದು ಬಹುತೇಕರ ಸಾಮಾನ್ಯ ಪ್ರಶ್ನೆ. ಕಾರಣ, ಈ ಉಭಯವಾಸಿಗಳನ್ನು ನೋಡಿದರೆ ಹಲವರಿಗೆ ಜುಗುಪ್ಸೆ. ಮತ್ತೆ ಕೆಲವರಿಗೆ ಉದಾಸೀನ, ಅಲರ್ಜಿ. ಕೆಲಸ ಇಲ್ಲದವರ ದಗದ – ಎನ್ನುವ ಮನೋಭಾವ.
ಆದರೆ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ, ಮುಂಬೈ ಉರಗ ಅಭ್ಯಾಸಿಗಳಿಗೆ ಐದು ದಿನಗಳ (ಸೆಪ್ಟೆಂಬರ್ 8 ರಿಂದ 12, 2022. ಸಮೀಕ್ಷಾ ವರದಿ ಸಿದ್ಧಗೊಂಡಿದ್ದು ನವೆಂಬರ್ 5, 2022) ‘ಹರ್ಪೆಟಾಲಜಿ ಫೀಲ್ಡ್ ಕ್ಯಾಂಪ್’ ಆಯೋಜಿಸಿತ್ತು, ಕೊಡಗಿನ ಕಬ್ಬಿನಕಾಡು ಬಳಿಯ ಯಾವಕಪಾಡಿಯ ಸುರೇಶ ಚಂಗಪ್ಪ ಅವರ ಚಿಂಗಾರಾ ಹನಿ ವ್ಯಾಲಿ ಕಾಫಿ ಎಸ್ಟೇಟ್ನಲ್ಲಿ. ಬಿರುಸಾದ ಮಳೆಯ ಮಧ್ಯೆಯೇ ನಮ್ಮ ಕ್ಷೇತ್ರಕಾರ್ಯ, ಸಮೀಕ್ಷೆ ನಡೆಯಿತು.
ವಿರಾಜಪೇಟೆ ಬಳಿಯ ಪೊನ್ನಂಪೇಟೆ ಅರಣ್ಯ ಸಂಶೋಧನಾ ಮಹಾವಿದ್ಯಾಲಯದ ಪ್ರಾಣಿಶಾಸ್ತçಜ್ಞ ಡಾ. ಕೇಶವಮೂರ್ತಿ, ಬಿ.ಎನ್.ಎಚ್.ಎಸ್.ನ ಶಿಕ್ಷಣಾಧಿಕಾರಿ ಕಿರಣ್ ಥಮ್ಮಾ ನೇತೃತ್ವದಲ್ಲಿ ನಾವು 12 ಜನ ಸಂಶೋಧಕರು ಕ್ಷೇತ್ರಕಾರ್ಯದಲ್ಲಿ ತೊಡಗಿದ್ದೆವು.
ಇತ್ತೀಚೆಗೆ ಉಂಟಾದ ಭೂಕುಸಿತ, ಸತತ ಮಳೆಯ ಅವಾಂತರ, ಅತಿಕ್ರಮಣದಿಂದ ಬದಲಾದ ಗುಡ್ಡ, ಗೋಮಾಳ ಹಾಗೂ ತಟಾಕು-ಕಣಿವೆಗಳು, ಲ್ಯಾಂಡ್ಸ್ಕೇಪ್ ಡಿಸ್ಪ್ಲೇಸ್ಮೆಂಟ್ ಅವಾಂತರಗಳಿಂದ ಉಭಯವಾಸಿಗಳ ಮೇಲಾದ ಪರಿಣಾಮಗಳ ಅಧ್ಯಯನ ಈ ಕ್ಷೇತ್ರಕಾರ್ಯದ ಉದ್ದೇಶವಾಗಿತ್ತು.
ನಿಮಗೆ ಗೊತ್ತೇ?
ಉಭಯಜೀವಿ(ನೆಲ-ಜಲಚರ) ಕಪ್ಪೆಗಳು ಮತ್ತು ‘ಟೋಡ್’ ಕುಟುಂಬ ತುಂಬ ದೊಡ್ಡದು. ಅಂದಾಜು 360 ಮಿಲಿಯನ್ ವರ್ಷಗಳಷ್ಟು ಹಿಂದೆ ಈ ಭೂಗ್ರಹದ ಮೇಲೆ ಉದಯಿಸಿದ ಪ್ರಾಣಿಸಂಕುಲವದು! 6,900 ಪ್ರಜಾತಿಗೆ ಸೇರಿದ ಕಪ್ಪೆಗಳನ್ನು ವಿಶ್ವದಾದ್ಯಂತ ಪ್ರಾಣಿಶಾಸ್ತ್ರಜ್ಞರು ಗುರುತಿಸಿದ್ದಾರೆ. ವಿಶೇಷವೆಂದರೆ ಕನ್ನಡಿಗ ವಿಜ್ಞಾನಿಗಳಾದ ಡಾ. ಕೆ.ವಿ. ಗುರುರಾಜ್, ಡಾ. ವರದಗಿರಿ ಮೊದಲಾದವರು ಮುಂಚೂಣಿಯಲ್ಲಿದ್ದಾರೆ.
ಗಮನಿಸಿ: ಮನುಷ್ಯ ಈ ಭೂಮಿಯ ಮೇಲೆ ಜನ್ಮತಳೆದು ಕೇವಲ 0.2 ಮಿಲಿಯನ್ ವರ್ಷಗಳಾಗಿವೆ. ನಾವು ಒಂದೇ ಪ್ರಜಾತಿಗೆ ಸೇರಿದವರು – ‘ಹೋಮೋ ಸೆಪಿಯನ್ಸ್’.
ಆಶ್ಚರ್ಯವೆಂದರೆ…
ಕಪ್ಪೆಗೆ ಎರಡು ಹಂತದ ಬದುಕಿದೆ. ಮೊದಲ ಹಂತ ‘ಟ್ಯಾಡ್ಪೋಲ್ಸ್’ ಸಾಮಾನ್ಯವಾಗಿ ನೀರಿನಲ್ಲಿ ಪಲ್ಲವಿಸುತ್ತವೆ. ಎರಡನೇ ಹಂತ, ಯುವಾವಸ್ಥೆ, ಸಾಮಾನ್ಯವಾಗಿ ನೀರಿನಿಂದ ಹೊರಗಡೆಯೇ ಅವುಗಳ ಬದುಕು. ಕಪ್ಪೆಗಳು ಕಾಣಸಿಗುವ ಪ್ರದೇಶದ ಪಾರಿಸರಿಕ ಆರೋಗ್ಯವನ್ನು ಸುಲಭವಾಗಿ ನಿರ್ಧರಿಸಬಹುದು. ಮನುಷ್ಯರು ಅನಾಯಾಸವಾಗಿ ಬದುಕಬಹುದಾದ ವಾತಾವರಣವದು. ಹೀಗಾಗಿ ಕಪ್ಪೆಗಳು ನಿಸರ್ಗದ ಆರೋಗ್ಯ ಸೂಚಕಗಳು. ಜೊತೆಗೆ ಆ ಭೂಪ್ರದೇಶದ ಐತಿಹಾಸಿಕ ವಿಕಾಸದ ತಾಮ್ರಪಟದಂತೆ! ‘ಪರ್ಮಿಯೇಬಲ್ ಸ್ಕಿನ್’ – ತಮ್ಮ ಮೈಚರ್ಮದ ಮೂಲಕ ಉಸಿರಾಡುವ ವ್ಯವಸ್ಥೆ ಅವುಗಳ ವಿಕಾಸದ ಹಾದಿಯಲ್ಲಿ ಮೈಗೂಡಿದೆ.
ಹೀಗಾಗಿ ಪಾರಿಸರಿಕ ವ್ಯವಸ್ಥೆಯ ಯಾವುದೇ ಸೂಕ್ಷö್ಮ ಬದಲಾವಣೆ, ಅಸೂಕ್ಷ್ಮ ಅಧ್ವಾನಕ್ಕೆ ಕಪ್ಪೆಗಳು ಮೊದಲ ಬಲಿ. ಜಾಗತಿಕ ತಾಪಮಾನದ ಏರಿಕೆಯಿಂದ ಮೊದಲು ಬಳಲಿದ ಜೀವಿ ಈ ಉಭಯವಾಸಿ ಕಪ್ಪೆಗಳು.
ಪರಿಸರದ ಮೇಲಿನ ಜಾಗತಿಕ ಒತ್ತಡಗಳ ಸ್ಥಳೀಯ ಪರಿಣಾಮವನ್ನು ಅಭ್ಯಸಿಸುವುದಾದರೆ ಕಪ್ಪೆಗಳ ಇರುವಿಕೆ ಮತ್ತು ಲಭ್ಯ ದತ್ತಾಂಶಗಳ ಯಾದೃಚ್ಛಿಕ ಮಾದರಿ ತೌಲನಿಕ ಅಧ್ಯಯನದಿಂದ ಸಾಧ್ಯ. ಉದಾಹರಣೆಗೆ, ಕಪ್ಪೆಗಳು ನಮ್ಮ ಮನೆಯ ಸುತ್ತಮುತ್ತ, ಮನೆ ಅಂಗಳದ ಕೈತೋಟ, ಹೂದೋಟ, ಗದ್ದೆ, ಕೃಷಿಭೂಮಿ, ತೋಟ, ತರಿಭೂಮಿ, ಜಲಮೂಲಗಳಲ್ಲಿ ಕಂಡುಬಂದರೆ ಅದು ವಾಸಯೋಗ್ಯ ಪರಿಸರ. ಏರಿಳಿತಗಳಾದಲ್ಲಿ ಕಪ್ಪೆಗಳು ಕೂಡಲೇ ಜಾಗ ಖಾಲಿ ಮಾಡುತ್ತವೆ; ಸುಧಾರಿಸಿದರೆ ಪುನಃ ಪ್ರತ್ಯಕ್ಷ!
ಕೆಲ ವರ್ಷಗಳ ಹಿಂದೆ ಇದ್ದ ಕಪ್ಪೆಗಳು ಈಗ ನಮ್ಮ ವಾಸಸ್ಥಳ, ಕೃಷಿಭೂಮಿಯಲ್ಲಿ ಕಾಣಸಿಗದಿದ್ದರೆ ಪರಿಸರ ಬದಲಾವಣೆಯ ಅಡ್ಡಪರಿಣಾಮಗಳಿಗೆ ನಮ್ಮ ಆ ಭೂಮಿ ಒಳಗಾಗಿದೆ ಎಂದೇ ಕಪ್ಪೆಗಳ ತಜ್ಞರು (‘ಬಾಟ್ರಾಕಾಲಜಿಸ್ಟ್’) ತೀರ್ಮಾನಿಸುತ್ತಾರೆ. ಇದರರ್ಥ, ನಮ್ಮ ಸುತ್ತಮುತ್ತಲಿನಲ್ಲಿರುವ ಕ್ರಿಮಿ, ಕೀಟ ಮತ್ತು ಸೊಳ್ಳೆಗಳಂತಹ ಉಪದ್ರವಕಾರಿ ಪತಂಗಗಳನ್ನು ನಿಯಂತ್ರಿಸುವ, ನೈಸರ್ಗಿಕ ಆಹಾರ ಸರಪಳಿಯ, ಮಹತ್ತ್ವದ ಕೊಂಡಿ ಈ ಕಪ್ಪೆಗಳು!
ಕಪ್ಪೆಗಳ ಏಕಾಏಕಿ ನಿರ್ಗಮನ ಹೆಚ್ಚೂಕಡಮೆ ಸಜೀವಿಗಳಿಗೆ ಮುಂಬರಲಿರುವ ಮರಣಶಾಸನದ ಮುನ್ನೆಚ್ಚರಿಕೆ ಘಂಟೆ.
ವಿಶೇಷತೆ ಎಂದರೆ…
ಕಪ್ಪೆಮರಿಗಳು, ‘ಟ್ಯಾಡ್ಪೋಲ್ಸ್’ ಹುಟ್ಟಿದಾರಭ್ಯ ಮೀನಿನಂತೆ ಕಿವಿರುಗಳನ್ನು ಹೊಂದಿದ್ದು, ಕೆರೆಯಲ್ಲಿರುವ ‘ಆಲ್ಗೈ’ ಪಾಚಿ, ತೇಲುವ ಕಳೆಸಸ್ಯಗಳನ್ನು ಮೆಲ್ಲುತ್ತ, ಜಲಮೂಲಗಳ ಸ್ವಚ್ಛತೆಗೆ ಜಾಢಮಾಲಿಗಳಾಗಿ ದಿನದ 24 ತಾಸೂ ಕೆಲಸ ಮಾಡುತ್ತವೆ! ಜೊತೆಗೆ ಸೊಳ್ಳೆಗಳು ಪ್ರಜನನಕ್ಕೆ ಬಳಸುವ ನೀರಿನ ತೊಟ್ಟಿಗಳಲ್ಲಿ ಮೊಟ್ಟೆ, ಲಾರ್ವೆ ಭಕ್ಷಿಸಿ, ನೈಸರ್ಗಿಕವಾಗಿ ಸೊಳ್ಳೆಗಳನ್ನು ಕಪ್ಪೆಮರಿಗಳು ನಿಯಂತ್ರಿಸುತ್ತವೆ.
ಬಾಟ್ರಾಕಾಲಜಿ ಅಂದರೇನು?
ಕಪ್ಪೆ, ಟೋಡ್ಸ್ ಸೇರಿ – ಈ ಎಲ್ಲ ಸೂಕ್ಷö್ಮ ಪಾರಿಸರಿಕ ವ್ಯವಸ್ಥೆಯ ಅಧ್ಯಯನವನ್ನು ‘ಬಾಟ್ರಾಕಾಲಜಿ’ ಎನ್ನಲಾಗುತ್ತದೆ. 10ಕ್ಕಿಂತ ಹೆಚ್ಚು ಪ್ರಜಾತಿಗೆ ಸೇರಿದ ಕಪ್ಪೆಗಳು ಕಾಣಸಿಗುವ ‘ಕಾಲೊನಿ’ ‘ಬಾಟ್ರಾಕೇರಿಯಮ್’. ಅವುಗಳ ಶಾಸ್ತ್ರೀಯ ಅಧ್ಯಯನ ನಿರತರಿಗೆ ‘ಬಾಟ್ರಾಕಾಲಜಿಸ್ಟ್’ ಎಂದು ಕರೆಯಲಾಗುತ್ತದೆ.
ಕಪ್ಪೆಗಳು ನೋಡಲು ಅಸಹ್ಯವಾಗಿ ಕಂಡರೂ, ಹೇವರಿಕೆ ತರಿಸಿದರೂ, ಭೂಗ್ರಹದ ಮೇಲೆ ತುಂಬಾ ಜಾಣ ಪ್ರಜಾತಿಗೆ ಸೇರಿದ ಪ್ರಾಣಿಗಳು. ಸ್ಥಳೀಯವಾಗಿ, ಕೇವಲ 5 ಚ.ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಮಾದರಿ ‘ಕಪ್ಪೆ ಉದ್ಯಾನ’ ಬಾಟ್ರಾಕೇರಿಯಮ್ ನಾವು ಯೋಜಿಸಬಹುದು. ಕಾರಣ, ಕಪ್ಪೆಗಳು ತುಂಬಾ ದೂರದೂರಕ್ಕೆ ವಲಸೆ ಹೋಗಲು ಬಯಸದ ಜೀವಿಗಳು.
ಸುಮಾರು 100 ಚ.ಕಿ.ಮೀ. ವ್ಯಾಪ್ತಿಯ ಕಪ್ಪೆ ಉದ್ಯಾನ ನೈಸರ್ಗಿಕವಾದದ್ದು. ಉದಾಹರಣೆಗೆ ಪಶ್ಚಿಮಘಟ್ಟದ ವಿವಿಧ ಭಾಗಗಳು ಮತ್ತು ಒಟ್ಟಾರೆ ಅದ್ಭುತವಾದ ಉಭಯವಾಸಿಗಳ ರಮ್ಯ ತಾಣ. ಸಣ್ಣ ಕಪ್ಪೆ ಉದ್ಯಾನದಲ್ಲಿ ಅಲ್ಲಿ ಲಭ್ಯವಿರುವ ಎಲ್ಲ ಪ್ರಜಾತಿಯ ಕಪ್ಪೆಗಳನ್ನು ಗುರುತಿಸುವುದು ಸುಲಭವಾದರೆ, ದೊಡ್ಡ ‘ಬಾಟ್ರಾಕೇರಿಯಮ್’ನಲ್ಲಿ ಅತಿ ಹೆಚ್ಚು ಪ್ರಜಾತಿಯ ಕಪ್ಪೆ ಮತ್ತು ‘ಟೋಡ್’ ಪಲ್ಲವಿಸಲು ಸಾಧ್ಯವಿದೆ.
ನಮ್ಮೂರಲ್ಲೂ ಕಪ್ಪೆ ಉದ್ಯಾನ!
ಭಾರತೀಯ ವೈಜ್ಞಾನಿಕ ಹಾಗೂ ಕೈಗಾರಿಕೆ ಸಂಶೋಧನಾ ಮಂಡಳಿ, ನವದೆಹಲಿ (ಸಿ.ಎಸ್.ಐ.ಆರ್.) ಪೋಸ್ಟ್-ಡಾಕ್ಟರಲ್ ಫೆಲೋ ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪ್ರಾಣಿಶಾಸ್ತç ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಹಿರಿಯ ಪ್ರಾಣಿಶಾಸ್ತçಜ್ಞ ಡಾ. ಧೀರಜ್ ವೀರನಗೌಡ ಅವರ ನೇತೃತ್ವದ ತಜ್ಞ ಮಂಡಳಿ, ಹಳಿಯಾಳ ರಸ್ತೆಯ ಹಳ್ಳಿಗೇರಿ ಗ್ರಾಮದ ನೇಚರ್ ಫಸ್ಟ್ ಇಕೋ ವಿಲೇಜ್ ಸುತ್ತಮುತ್ತ, ನೇಚರ್ ರಿಸರ್ಚ್ ಸೆಂಟರ್ ವತಿಯಿಂದ 5 ಚ.ಕಿ.ಮೀ. ವ್ಯಾಪ್ತಿಯಲ್ಲಿ ಕಪ್ಪೆ ಉದ್ಯಾನ ನಿರ್ಮಿಸಲು, ಅಧ್ಯಯನ ಆರಂಭಿಸಿದೆ.
ತನ್ಮೂಲಕ ಸ್ಥಳೀಯ ಪರಿಸರದಲ್ಲಿ ಆಗಿರುವ ಅಥವಾ ಆಗಲಿರುವ ವ್ಯತ್ಯಾಸಗಳನ್ನು ಗುರುತಿಸಿ, ವೈಜ್ಞಾನಿಕ ರೀತಿಯಲ್ಲಿ ದಾಖಲಿಸಿ, ಸಂಶೋಧನಾ ಪ್ರಬಂಧಗಳ ಮೂಲಕ ನೀತಿ-ನಿರೂಪಕರ ಗಮನಸೆಳೆಯುವ, ಪ್ರಧಾನಮಂತ್ರಿಯವರ ಮಹತ್ತ್ವಾಕಾಂಕ್ಷೆಯ ‘ವೋಕಲ್ ಫಾರ್ ಲೋಕಲ್’ ಜೀವಂತವಾಗಿಡುವ ಪುಟ್ಟಪ್ರಯತ್ನಕ್ಕೆ ಸಾಮಾಜಿಕ ಹೊಣೆಗಾರಿಕೆ ನಿಧಿ ಯೋಜನೆ ಅಡಿ, ಎಲ್ಲ ವೆಚ್ಚ ನಿಭಾಯಿಸಲು ಸಾಮಾಜಿಕೋದ್ಯಮಿ ಪಂಚಾಕ್ಷರಿ ಹಿರೇಮಠ ಸಿದ್ಧರಾಗಿದ್ದಾರೆ. ಮುಂಬರುವ 10 ವರ್ಷಗಳಲ್ಲಿ ಪುಟ್ಟ ಮಾದರಿ ಕಪ್ಪೆ ಉದ್ಯಾನ ಇಲ್ಲಿ ಗಮನಸೆಳೆಯಲಿದೆ.
ಸ್ಥಳೀಯಮಟ್ಟದ ಇಂತಹ ಪುಟ್ಟ ಪ್ರಯತ್ನಗಳೇ, ಜಾಗತಿಕ ಸಮಸ್ಯೆಗಳಿಗೆ ನೆಲಮೂಲದ ಪರಿಹಾರ ಸೂಚಿಸಬಲ್ಲವು ಎಂಬ ವಿಶ್ವಾಸ ಈ ಯೋಚನೆ-ಯೋಜನೆಯ ಹಿಂದೆ ಅಡಗಿದೆ.
‘ದ ರುಫೋರ್ಡ್ ಫೌಂಡೇಷನ್’
ದ ರುಫೋರ್ಡ್ ಫೌಂಡೇಷನ್ ಕೊಡಮಾಡಿದ ‘ರುಫೋರ್ಡ್ ಸ್ಮಾಲ್ ಗ್ರಾö್ಯಂಟ್ಸ್ ಪ್ರೋಗ್ರಾಮ್ (22312-1) 2018 ಅಡಿ, ಪ್ರೀತಿ ಹೆಬ್ಬಾರ ಅವರ, ‘ಥಿಂಕ್ ಫ್ರಾಗ್’ ಯೋಜನೆ ಅಡಿ, ‘ಎಕಲಾಜಿಕಲ್ ಅಸೆಸ್ಮೆಂಟ್ ಆಂಡ್ ಕಾನ್ಸರ್ವೇಶನ್ ಎಜ್ಯುಕೇಶನ್ ಆನ್ ಆಂಫಿಬಿಯನ್ಸ್ ಫ್ರಾಮ್ ಕೊಡಗು ರೀಜನ್ ಅಫ್ ವೆಸ್ಟರ್ನ್ ಘಾಟ್ಸ್, ಇಂಡಿಯಾ’ ಅಧ್ಯಯನದ ಅಧಾರದಲ್ಲಿ ಈ ಕ್ಷೇತ್ರಕಾರ್ಯವನ್ನು ಯೋಜಿಸಲಾಗಿತ್ತು. ಸಹಸಂಶೋಧಕರಾಗಿ ಶ್ರೀವಿ ಕಲ್ಯಾಣ್, ಗುರುರಾಜ ಕೆ.ವಿ., ಮಧುಶ್ರೀ ಮುದ್ಕೆ ಹಾಗೂ ಕಿರಣ್ ಬಾಗಡೆ ಈ ಯೋಜನೆಯಡಿ ಗಮನಾರ್ಹ ಕೆಲಸ ಮಾಡಿದ್ದಾರೆ.
‘ದ ಹನಿ ವ್ಯಾಲಿ ಬಾಟ್ರಾಕೇರಿಯಮ್’
ದ ಹನಿ ವ್ಯಾಲಿ ಬಾಟ್ರಾಕೇರಿಯಮ್ನಲ್ಲಿನ ಮೀಟ್ ದ ಫ್ರಾಗ್ಸ್ ಎಂಬ ವಿನೂತನ ಯೋಜನೆ ವಿಶ್ವದ ಗಮನ ಸೆಳೆದಿದೆ. ‘ಗ್ರ್ಯಾಯಂಡಿಸ್ ಟ್ರೇಲ್’ ಮತ್ತು ‘ಮಲಬಾರಿಕಸ್ ಟ್ರೇಲ್’. ಹೀಗೆ ಒಟ್ಟು 18 ಟ್ರೇಲ್ಗಳಿರುವ ಚಿಂಗಾರಾ ಹನಿ ವ್ಯಾಲಿ ಕಾಫಿ ಎಸ್ಟೇಟ್ ಮತ್ತು ವ್ಹೈಟ್ ವಾಟರ್ ಫಾಲ್ಸ್ಗಳ ಮೂಲಕ 5 ದಿನಗಳ ಹಗಲು ಮತ್ತು ರಾತ್ರಿ ಚಾರಣದಲ್ಲಿ ಒಟ್ಟು 18 ಪ್ರಜಾತಿಗೆ ಸೇರಿದ ವಿಶಿಷ್ಟ ಕಪ್ಪೆಗಳನ್ನು ಗುರುತಿಸಿ ದಾಖಲಿಸಲು ನಮಗೆ ಸಾಧ್ಯವಾಯಿತು.
ಚಾರಣದ ಹಾದಿ ‘ಟ್ರೇಲ್’
ಚಾರಣದ ಹಾದಿ, ಉದ್ದಕ್ಕೆ ‘ಟ್ರೇಲ್’ ಎನ್ನಲಾಗುತ್ತದೆ. ‘ಸ್ಮಾಲ್ ಟ್ರೇಲ್’ ಎಂದರೆ, 1.5 ಕಿ.ಮೀ. (ಒಟ್ಟು 3 ಕಿ.ಮೀ.ಗಳು). ‘ಬಿಗ್ ಟ್ರೇಲ್’ ಎಂದರೆ, 3.5 ಕಿ.ಮೀ. ಕನಿಷ್ಠ ಮತ್ತು ಗರಿಷ್ಠ 7.5 ಕಿ.ಮೀ. ಉದ್ದದ ಹಾದಿ, ಗುಡ್ಡ-ಗಾಡಿನ ಚಾರಣ. (ಒಟ್ಟು 7 ಕಿ.ಮೀ. ಅಥವಾ 15 ಕಿ.ಮೀ.). ಹನಿ ವ್ಯಾಲಿಯ ಮಲಬಾರಿಕಸ್ ಮತ್ತು ಗ್ರಾö್ಯಂಡಿಸ್ ಟ್ರೇಲ್ಗಳು 1.5 ಕಿ.ಮೀ. ಉದ್ದದ ಸ್ಮಾಲ್ ಟ್ರೇಲ್ಗಳು.
ಈ ಸಾಕ್ಷ್ಯಚಿತ್ರ ವೀಕ್ಷಿಸಿ.
Last Hop(e) – https://youtu.be/4eaQE9Ig7-8
ಇಕೋ ಎಜ್ಯುಕೇಶನ್ ಪಾರ್ಕ್ – ಚಿಂಗಾರಾ
ನಮ್ಮದು ರೆಸಾರ್ಟ್ ಅಲ್ಲ. ಇಕೋ ಎಜ್ಯುಕೇಶನ್ ಪಾರ್ಕ್. ಪರಿಸರಸ್ನೇಹಿ ಮತ್ತು ಜವಾಬ್ದಾರಿಯುತ ಪ್ರವಾಸಿಗರು ಮಾತ್ರ ನಮ್ಮ ಅತಿಥಿಗಳಾಗಬಹುದು. ‘ಲೀಚ್’ ಇಂಬಳಗಳ ಕಡಿತಕ್ಕೆ ಲೊಚಗುಟ್ಟದೇ ಅನುಭವಿಸುವ ತಾಳ್ಮೆ ಇರುವವರಿಗೆ ಸ್ವಾಗತ. ಇದು ನಿಮ್ಮದೇ ಮನೆ. ಅದೃಷ್ಟವಿದ್ದರೆ, ಆನೆ, ಕಾಡುಕೋಣ, ಚಿರತೆ, ಕೆಲ ಪ್ರಜಾತಿಯ ಪಿಟ್ ವೈಪರ್ಗಳು, ಪಾತರಗಿತ್ತಿ, ಚಿಟ್ಟೆ, ಹ್ಯಾತೆ, ಕಪ್ಪೆ ಮತ್ತು ಸ್ಲಗ್ಸ್, ಪಕ್ಷಿಗಳನ್ನು ನೋಡಬಹುದು. ಸ್ಥಳೀಯ ಸೂಜಿ ಮೆಣಸು, ಲವಂಗ, ಏಲಕ್ಕಿ – ಹೀಗೆ ಗ್ರಾಮೋದ್ಯೋಗದ ನಮೂನೆಗಳನ್ನು ಕೂಡ ನೋಡಬಹುದು.
ಸುರೇಶ್ ಚೆಂಗಪ್ಪ: ಇಡೀ ದೇಶಕ್ಕೆ ಮಾದರಿಯಾದ 1,500 ಪೆಟ್ಟಿಗೆಗಳ ಮೊದಲ ಜೇನು ಕಣಿವೆ ರೂಪಿಸಿದವರು. ಚಿಂಗಾರಾ ಹನಿ ವ್ಯಾಲಿ ಎಸ್ಟೇಟ್ ಮಾಲಿಕರು.
ಸಂಪರ್ಕ: 95918 21339 (ಬೆಳಗ್ಗೆ 9 ರಿಂದ ರಾತ್ರಿ 7ರ ತನಕ ಮಾತ್ರ) ಅಥವಾ 08272 – 238339/888
ನಾವು ಚಿಂಗಾರಾ ಹನಿ ವ್ಯಾಲಿ ಕಾಫಿ ಎಸ್ಟೇಟ್ ಮಲಬಾರಿಕಸ್ ಮತ್ತು ಗ್ರಾಂಡಿಸ್ ಹಾಗೂ ವ್ಹೈಟ್ ವಾಟರ್ ಫಾಲ್ಸ್ ಟ್ರೇಲ್ನಲ್ಲಿ ಗುರುತಿಸಿ, ದಾಖಲಿಸಿದ 18 ಕಪ್ಪೆಗಳು.
- Wayanad night frog
- Kempholey night frog
- Leaping frog
- Paddy field cricket frog
- Blue eyed bush frog
- Anil’s bush frog
- Forest Toad
- Dancing frog
- Charlie’s bush frog
- Variable bush frog
- White cheeked dancing frog
- Golden back frog
- Kempholey night frog
- Bicolored frog
- Bronze back frog
- Common Indian toad
- Confusing bush frog
- Wayanad bush frog